Telegram Join My Telegram WhatsApp Join My WhatsApp

ಕರ್ನಾಟಕ ಬಜೆಟ್ 2026 ಮುಖ್ಯಾಂಶಗಳು:

ಕರ್ನಾಟಕ ಬಜೆಟ್ 2026: ರೈತರಿಗೆ ₹30,000 ಕೋಟಿ ಸಾಲ, 3 ಲಕ್ಷ ಮನೆ ನಿರ್ಮಾಣ, ಗಂಗಾ ಕಲ್ಯಾಣಕ್ಕೆ ₹1.5 ಲಕ್ಷ – ಸಿದ್ದರಾಮಯ್ಯ ಬಜೆಟ್‌ನ ಪ್ರಮುಖ ಘೋಷಣೆಗಳು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026–27ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಅನ್ನು ಮಂಡಿಸಿದ್ದಾರೆ. “ಸರ್ವರ ಸಬಲೀಕರಣ ಮತ್ತು ನವ ಕರ್ನಾಟಕ ನಿರ್ಮಾಣ” ಎಂಬ ಧ್ಯೇಯದೊಂದಿಗೆ ಮಂಡನೆಯಾದ ಈ ಬಜೆಟ್‌ನಲ್ಲಿ ಕೃಷಿ, ವಸತಿ, ಮಹಿಳಾ ಕಲ್ಯಾಣ, ಕಾರ್ಮಿಕ ಕಲ್ಯಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ.
ಈ ಬಜೆಟ್‌ನಲ್ಲಿ ರೈತರು, ಬಡ ಕುಟುಂಬಗಳು, ಮಹಿಳೆಯರು ಮತ್ತು ಕಾರ್ಮಿಕರಿಗೆ ಹಲವು ಹೊಸ ಯೋಜನೆಗಳು ಮತ್ತು ಆರ್ಥಿಕ ಸೌಲಭ್ಯಗಳನ್ನು ಘೋಷಿಸಲಾಗಿದೆ. ವಿಶೇಷವಾಗಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ನೆರವು, ಮನೆ ನಿರ್ಮಾಣ ಯೋಜನೆಗಳು ಮತ್ತು ವಿವಿಧ ಕಲ್ಯಾಣ ಯೋಜನೆಗಳು ಜನರ ಗಮನ ಸೆಳೆದಿವೆ.

 ಕರ್ನಾಟಕ ಬಜೆಟ್ 2026-27ರ ಪ್ರಮುಖ ಮುಖ್ಯಾಂಶಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.
📌 ಬಜೆಟ್‌ನ ಪ್ರಮುಖ ಮುಖ್ಯಾಂಶಗಳು
✔️ 38 ಲಕ್ಷ ರೈತರಿಗೆ ₹30,000 ಕೋಟಿ ಶೂನ್ಯ ಬಡ್ಡಿ ಕೃಷಿ ಸಾಲ
✔️ ಈ ವರ್ಷ ರಾಜ್ಯದಲ್ಲಿ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ
✔️ ‘ನಮ್ಮ ಮನೆ’ ಯೋಜನೆಯಡಿ 50,000 ನಿವೇಶನ ವಿತರಣೆ
✔️ ಗಂಗಾ ಕಲ್ಯಾಣ ಯೋಜನೆ ಸಹಾಯಧನ ₹75,000 ರಿಂದ ₹1.50 ಲಕ್ಷಕ್ಕೆ ಏರಿಕೆ
✔️ ಮೀನುಗಾರಿಕೆ ಕಿಟ್ ಮೌಲ್ಯ ₹20,000ಕ್ಕೆ ಹೆಚ್ಚಳ
✔️ ರೇಷ್ಮೆ ಬೆಳೆಗಾರರಿಗೆ ಸಾಗಾಣಿಕೆ ಸಹಾಯಧನ ಹೆಚ್ಚಳ
🏠 ವಸತಿ ಮತ್ತು ಮೂಲಸೌಕರ್ಯ ಯೋಜನೆಗಳು.

ರಾಜ್ಯದ ಬಡ ಜನರಿಗೆ ಮನೆ ಒದಗಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, ಈ ಬಜೆಟ್‌ನಲ್ಲಿ ವಸತಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

  • ಈ ವರ್ಷ ಸರ್ಕಾರವು 3,00,000 ಮನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ. ಇದಲ್ಲದೆ, ಹಿಂದಿನ ಸರ್ಕಾರ ಮಂಜೂರು ಮಾಡಿದ್ದ ಸುಮಾರು 4.9 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ವಿಶೇಷ ಕ್ರಮ ಕೈಗೊಳ್ಳಲಾಗುತ್ತದೆ.
    ಇದರ ಜೊತೆಗೆ ‘ನಮ್ಮ ಮನೆ’ ಯೋಜನೆಯಡಿ ಮುಂದಿನ ಎರಡು ವರ್ಷಗಳಲ್ಲಿ 50,000 ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲು ಯೋಜಿಸಲಾಗಿದೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿಯೂ ಒಂದು ಮಹತ್ವದ ಯೋಜನೆ ಘೋಷಿಸಲಾಗಿದೆ. ಇಲ್ಲಿ ಕೆ.ಹೆಚ್.ಬಿ ಸೂರ್ಯ ಕ್ರೀಡಾ ಗ್ರಾಮ ನಿರ್ಮಾಣವಾಗಲಿದ್ದು, ಸುಮಾರು 80,000 ಆಸನ ಸಾಮರ್ಥ್ಯದ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗಲಿದೆ.

  • 🌾 ರೈತರಿಗೆ ಬಂಪರ್ ಘೋಷಣೆ
    ಕೃಷಿ ಕ್ಷೇತ್ರವನ್ನು ಬಲಪಡಿಸಲು ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ಮಹತ್ವದ ಘೋಷಣೆಗಳನ್ನು ಮಾಡಿದೆ.
    ರಾಜ್ಯದ 38 ಲಕ್ಷ ರೈತರಿಗೆ ₹30,000 ಕೋಟಿ ಶೂನ್ಯ ಬಡ್ಡಿ ಕೃಷಿ ಸಾಲ ನೀಡುವ ಯೋಜನೆ ಘೋಷಿಸಲಾಗಿದೆ. ಈ ಮೂಲಕ ರೈತರಿಗೆ ಕಡಿಮೆ ಬಡ್ಡಿಯಲ್ಲಿ ಹಣ ದೊರೆಯಲಿದೆ.
    ಇದರ ಜೊತೆಗೆ ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಎಪಿಎಂಸಿ ಮಾರುಕಟ್ಟೆಗಳಲ್ಲಿ ERP ಡಿಜಿಟಲ್ ವ್ಯವಸ್ಥೆ ಜಾರಿಗೆ ತರಲು ₹10 ಕೋಟಿ ವೆಚ್ಚ ಮಾಡಲಾಗುತ್ತದೆ.
    ಇದು ರೈತರಿಗೆ ತಮ್ಮ ಬೆಳೆಗಳ ಮಾರಾಟದಲ್ಲಿ ಹೆಚ್ಚಿನ ಸುಗಮತೆ ಒದಗಿಸುತ್ತದೆ.

 

  •  ಜಲಸಂಪನ್ಮೂಲ ಮತ್ತು ನೀರಾವರಿ ಯೋಜನೆಗಳು
    ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಸಹ ಈ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.
    ಮೇಕೆದಾಟು ಯೋಜನೆಗಾಗಿ ಪರಿಷ್ಕೃತ DPR ಸಿದ್ಧಪಡಿಸಲಾಗಿದ್ದು, ಕೇಂದ್ರ ಅರಣ್ಯ ಇಲಾಖೆಯ ಅನುಮೋದನೆ ಪಡೆಯಲು ಸರ್ಕಾರ ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಿದೆ.ಅದೇ ರೀತಿ ಎತ್ತಿನಹೊಳೆ ಯೋಜನೆಯ ಎರಡನೇ ಹಂತದ ಕಾಲುವೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವಡೇರಹಳ್ಳಿ ಬಳಿ 1.2 ಟಿಎಂಸಿ ಸಾಮರ್ಥ್ಯದ ಹೊಸ ಸಮತೋಲನಾ ಜಲಾಶಯ ನಿರ್ಮಾಣ ಮಾಡಲು ಯೋಜಿಸಲಾಗಿದೆ.
    ಇದರಿಂದ ಹೆಚ್ಚುವರಿ ನೀರು ಸಂಗ್ರಹಿಸಲು ಮತ್ತು ನೀರಾವರಿ ವ್ಯವಸ್ಥೆಯನ್ನು ಸುಧಾರಿಸಲು ಸಹಾಯವಾಗುತ್ತದೆ.

 

  •  ಸಮಾಜ ಕಲ್ಯಾಣ ಯೋಜನೆಗಳು
    ಸಮಾಜದ ಹಿಂದುಳಿದ ವರ್ಗಗಳ ಶಿಕ್ಷಣ ಮತ್ತು ಅಭಿವೃದ್ಧಿಗೆ ಸರ್ಕಾರ ಹಲವು ಹೊಸ ಯೋಜನೆಗಳನ್ನು ಘೋಷಿಸಿದೆ.
    ರಾಜ್ಯದ 30 ಕ್ರೈಸ್ ವಸತಿ ಶಾಲೆಗಳಿಗೆ ಸುಮಾರು ₹660 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲು ಯೋಜಿಸಲಾಗಿದೆ.
    ಇದರ ಜೊತೆಗೆ ವಿವಿಧ ಅಭಿವೃದ್ಧಿ ನಿಗಮಗಳಿಗೆ ಒಟ್ಟು ₹1,500 ಕೋಟಿ ಅನುದಾನ ನೀಡಲಾಗಿದೆ.
    ಬೌದ್ಧ ಧರ್ಮೀಯರ ಅಭಿವೃದ್ಧಿಗಾಗಿ ‘ಬೌದ್ಧ ಅಭಿವೃದ್ಧಿ ನಿಗಮ’ ಸ್ಥಾಪನೆ ಮಾಡುವುದಾಗಿ ಸರ್ಕಾರ ಘೋಷಿಸಿದೆ.
    ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಆಯೋಗ ಸ್ಥಾಪನೆ ಕೂಡ ಈ ಬಜೆಟ್‌ನಲ್ಲಿ ಘೋಷಿಸಲಾಗಿದೆ.

 

  • ಮಹಿಳಾ ಮತ್ತು ಮಕ್ಕಳ ಕಲ್ಯಾಣ
    ರಾಜ್ಯದ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಈ ಬಜೆಟ್‌ನಲ್ಲಿ ಘೋಷಿಸಲಾಗಿದೆ.
    ರಾಜ್ಯದ 1,39,844 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಹೆಚ್ಚುವರಿ ಸಮವಸ್ತ್ರ ನೀಡಲಾಗುತ್ತದೆ.
    ಇದರ ಜೊತೆಗೆ ಮಾಜಿ ದೇವದಾಸಿಯರು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೀಡುವ ಪ್ರೋತ್ಸಾಹಧನವನ್ನು ₹45,000ಕ್ಕೆ ಹೆಚ್ಚಿಸಲಾಗಿದೆ.

ನಿಮ್ಹಾನ್ಸ್ ಮತ್ತು ಡಿಮ್ಹಾನ್ಸ್ ಸಹಯೋಗದಲ್ಲಿ 18 ವರ್ಷದೊಳಗಿನ ಮಕ್ಕಳಿಗಾಗಿ ಮಾದಕ ವ್ಯಸನ ಮುಕ್ತ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ಕೂಡ ಘೋಷಿಸಲಾಗಿದೆ

  • 👷 ಕಾರ್ಮಿಕ ಕಲ್ಯಾಣ ಯೋಜನೆಗಳು
    ಕಾರ್ಮಿಕರ ಜೀವನಮಟ್ಟ ಸುಧಾರಿಸಲು ಹಲವು ಮಹತ್ವದ ಯೋಜನೆಗಳನ್ನು ಸರ್ಕಾರ ಘೋಷಿಸಿದೆ.
    ಹುಬ್ಬಳ್ಳಿ-ಧಾರವಾಡದಲ್ಲಿ ₹200 ಕೋಟಿ ವೆಚ್ಚದಲ್ಲಿ ಕಟ್ಟಡ ಕಾರ್ಮಿಕರಿಗಾಗಿ ಅತ್ಯಾಧುನಿಕ ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ ಮಾಡಲಾಗುತ್ತದೆ.ಇದರ ಜೊತೆಗೆ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ₹600 ಕೋಟಿ ವೆಚ್ಚದಲ್ಲಿ 10 ಜಿಟಿಟಿಸಿ ಕೇಂದ್ರಗಳು ಮತ್ತು 62 ಶ್ರಮಿಕ ವಸತಿ ಶಾಲೆಗಳು ಆರಂಭಿಸಲಾಗುತ್ತವೆ.
    ಅಸಂಘಟಿತ ಕಾರ್ಮಿಕರಿಗೆ ಉದ್ಯೋಗ ಮಾಹಿತಿ ನೀಡಲು ಆನ್‌ಲೈನ್ ಉದ್ಯೋಗ ವಿನಿಮಯ ಕೇಂದ್ರ ಕೂಡ ಆರಂಭಿಸಲಾಗುತ್ತದೆ.

 

  • ಮೀನುಗಾರಿಕೆ ಮತ್ತು ರೇಷ್ಮೆ ಬೆಳೆಗಾರರಿಗೆ ಸೌಲಭ್ಯ
    ಮೀನುಗಾರಿಕೆ ಕ್ಷೇತ್ರಕ್ಕೂ ಈ ಬಜೆಟ್‌ನಲ್ಲಿ ವಿಶೇಷ ಸೌಲಭ್ಯ ನೀಡಲಾಗಿದೆ.
    ಮೀನುಗಾರರಿಗೆ ನೀಡುವ ಉಚಿತ ಮೀನುಗಾರಿಕೆ ಕಿಟ್ ಮೌಲ್ಯವನ್ನು ₹10,000 ರಿಂದ ₹20,000ಕ್ಕೆ ಹೆಚ್ಚಿಸಲಾಗಿದೆ.
    ಮಂಗಳೂರಿನಲ್ಲಿ ಮೀನುಗಾರಿಕೆ ಕ್ಷೇತ್ರದ ‘ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದೆ.
    ರೇಷ್ಮೆ ಬೆಳೆಗಾರರಿಗೆ ಸಹ ಸರ್ಕಾರ ನೆರವು ನೀಡಿದ್ದು, ರೇಷ್ಮೆ ಗೂಡು ಸಾಗಾಣಿಕೆ ಸಹಾಯಧನವನ್ನು ಪ್ರತಿ ಕೆಜಿ ₹10 ರಿಂದ ₹20ಕ್ಕೆ ಹೆಚ್ಚಿಸಲಾಗಿದೆ.
    ಇದರ ಜೊತೆಗೆ ರಾಮನಗರ ಸೇರಿದಂತೆ ಐದು ಜಿಲ್ಲೆಗಳಲ್ಲಿ ಸಿಲ್ಕ್ ಪಾರ್ಕ್‌ಗಳನ್ನು ಸ್ಥಾಪಿಸುವ ಯೋಜನೆ ಘೋಷಿಸಲಾಗಿದೆ.

ಪ್ರಮುಖ ಸೂಚನೆ
ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ e-KYC ಆಗಿರುವುದು ಕಡ್ಡಾಯವಾಗಿದೆ.
ಅದಿಲ್ಲದಿದ್ದರೆ ಸರ್ಕಾರದಿಂದ ನೀಡುವ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುವುದಿಲ್ಲ.
ಹೀಗಾಗಿ ಎಲ್ಲಾ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ ಮತ್ತು ಆಧಾರ್ ವಿವರಗಳನ್ನು ಸರಿಯಾಗಿ ಲಿಂಕ್ ಮಾಡಿಕೊಂಡಿರಬೇಕು.

Leave a Comment